ಕೊಹೆನ್, ಸೇಮೂರ್ ಸ್ಟಾನ್ಲೆ
1917-. ಅಮೆರಿಕದ ಜೀವರಸಾಯನ ವಿಜ್ಞಾನಿ. 1917ರ ಏಪ್ರಿಲ್ 30ರಂದು ನ್ಯೂಯಾರ್ಕಿನಲ್ಲಿ ಜನನ. ಅಲ್ಲಿನ ಸ್ಟೇಟ್ ಕಾಲೇಜಿನಿಂದ ಬಿ.ಎಸ್. ಪದವಿಯನ್ನು ಪಡೆದು (1936) ಮುಂದೆ ಕೊಲಂಬಿಯ ವಿಶ್ವವಿದ್ಯಾಲಯದಿಂದ ಸುಪ್ರಸಿದ್ಧ ವಿಜ್ಞಾನಿ ಚಾರ್‍ಗಾಫ್ ಎಂಬಾತನ ನೇತೃತ್ವದಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ (1941). ಈತ ಸಂಶೋಧನೆಗೆ ಆರಿಸಿಕೊಂಡ ಕ್ಷೇತ್ರ ನಂಜುಗಳನ್ನು (ವೈರಸ್) ಕುರಿತದ್ದು. ಬ್ಯಾಕ್ಟೀರಿಯಗಳಿಗೆ ಮಾರಕಗಳಾದ ನಂಜುಗಳ ಬಗ್ಗೆ ಕ್ರಮಬದ್ಧವಾದ ಸಂಶೋಧನೆ ಕೈಗೊಂಡ ಮೊದಲನೆಯ ವಿಜ್ಞಾನಿ ಕೊಹೆನ್. ಅತಿ ತೀಕ್ಷ್ಣ (ವಿರುಲೆಂಟ್) ನಂಜುಗಳು ಬ್ಯಾಕ್ಟೀರಿಯಗಳನ್ನು ಸೋಂಕಿದಾಗ ಬ್ಯಾಕ್ಟೀರಿಯಗಳ ಕೋಶದಲ್ಲಿ ನ್ಯೂಕ್ಲಿಯಿಕ್ ಆಮ್ಲಗಳ ಚಯಾಪಚಯ ಕ್ರಿಯೆಯಲ್ಲಿ ತೀವ್ರವಾದ ಮಾರ್ಪಾಡುಗಳಾಗುತ್ತವೆ. ಇದರ ಫಲವಾಗಿ ಅತಿಥೇಯ (ಹೋಸ್ಟ್) ಬ್ಯಾಕ್ಟೀರಿಯಗಳಿಗೆ ವಿಶಿಷ್ಟವಾದ ಬಹ್ವಂಶಿಗಳು ಸಂಶ್ಲೇಷಣೆಯಾಗದೆ ನಂಜಿಗೆ ವಿಶಿಷ್ಟವಾದ ನ್ಯೂಕ್ಲಿಯಿಕ್ ಆಮ್ಲ ಮತ್ತು ಪ್ರೋಟೀನುಗಳು ಸಂಶ್ಲೇಷಣೆಯಾಗುತ್ತವೆ ಎಂದು ಕೊಹೆನ್ ತೋರಿಸಿದ. ಈ ಸಂಶೋಧನೆಗಳಲ್ಲಿ ಪ್ರಥಮಬಾರಿಗೆ ವಿಕಿರಣಪಟು ಸಮಸ್ಥಾನಿಗಳನ್ನು (ರೇಡಿಯೋ ಆಕ್ಟಿವ್ ಐಸೊಟೋಪ್ಸ್) ಈತ ಬಳಸಿದ.

	ವಯಾಟ್ ಎಂಬಾತನ ಜೊತೆಯಲ್ಲಿ ನಡೆಸಿದ ಸಂಶೋಧನೆಗಳ ಫಲವಾಗಿ ನಂಜಿನ ನ್ಯೂಕ್ಲಿಯಿಕ್ ಆಮ್ಲದಲ್ಲಿ, ಅದುವರೆಗೆ ಅಜ್ಞಾತವಾಗಿದ್ದ, 5-ಹೈಡ್ರಾಕ್ಸಿ ಮೀಥೈಲ್ ಸೈಟೋಸಿನ್ ಎಂಬ ಅಸಾಧಾರಣ ಪಿರಮಿಡ್‍ನ ವಸ್ತುವಿದೆ ಎಂದು ತಿಳಿದು ಬಂದಿತ್ತು (1952). ಇದು ಬ್ಯಾಕ್ಟೀರಿಯಗಳ ನ್ಯೂಕ್ಲಿಯಿಕ್ ಆಮ್ಲದಲ್ಲಿ ಇರುವುದಿಲ್ಲ. ಎಂದರೆ ಸೋಂಕಿನ ಫಲವಾಗಿ ಬ್ಯಾಕ್ಟೀರಿಯಕೋಶದಲ್ಲಿ ಈ ವಸ್ತುವನ್ನು ಉತ್ಪಾದಿಸುವ ಕಿಣ್ವಗಳು ಹೊಸದಾಗಿ ಉತ್ಪತ್ತಿಯಾಗುತ್ತವೆ ಎಂದಾಯಿತು. ಇಷ್ಟೇ ಅಲ್ಲದೆ ವ್ಯತ್ಯಯದ (ಮ್ಯುಟೇಷನ್) ಫಲವಾಗಿ ಸಹಜ ಪಿರಮಿಡೀನ್ ಥಯಾಮೀನನ್ನು ಸಂಶ್ಲೇಷಿಸುವ ಸಾಮಥ್ರ್ಯವನ್ನು ಕಳೆದುಕೊಂಡಿರುವ ಬ್ಯಾಕ್ಟೀರಿಯಗಳು ನಂಜು ಸೋಕಿದ ಅನಂತರ ಇದನ್ನು ಸಂಶ್ಲೇಷಿಸುವ ಸಾಮಥ್ರ್ಯವನ್ನು ಮರಳಿ ಪಡೆದುಕೊಳ್ಳುತ್ತವೆ. ನಂಜುಸೋಕಿದ ಬ್ಯಾಕ್ಟೀರಿಯಗಳು ಥಯಾಮಿನ್ ಮತ್ತು 5-ಮೀಥೈಲ್ ಸೈಟೋಸಿನ್‍ಗಳೆರಡನ್ನು ಸಂಶ್ಲೇಷಿಸುವ ಸಾಮಥ್ರ್ಯವುಳ್ಳ ಕಿಣ್ವಗಳನ್ನು ಉತ್ಪಾದಿಸುತ್ತವೆ ಎಂದು 1957ರಲ್ಲಿ ಕೊಹೆನ್ ತೋರಿಸಿದ. ಇಂಥ ಕಿಣ್ವಗಳ ಸಂಶ್ಲೇಷಣೆ ನಂಜಿನ ನ್ಯೂಕ್ಲಿಯಿಕ್ ಆಮ್ಲದ ನೇತೃತ್ವದಲ್ಲಿ ನಡೆಯುತ್ತದೆ. ಎಂದರೆ ನಂಜು ತನ್ನ ಆಶ್ರಯದಾತ ಬ್ಯಾಕ್ಟೀರಿಯದ ಕಿಣ್ವಗಳು ನಂಜಿನ ನ್ಯೂಕ್ಲಿಯಿಕ್ ಆಮ್ಲಗಳನ್ನು ಸೃಷ್ಟಿಸುವಂತೆ ಮಾಡುವುದಲ್ಲದೆ ಬ್ಯಾಕ್ಟೀರಿಯ ನೂತನ ಕಿಣ್ವಗಳನ್ನು ತಯಾರಿಸುವಂತೆ ಒತ್ತಾಯ ಪಡಿಸುತ್ತದೆ. ಪ್ರಾರಂಭದಲ್ಲಿ ಕಂಡುಬರುವ ಕಿಣ್ವಗಳ ಸಂಶ್ಲೇಷಣೆಗೆ ಹೊಸ ಮಾದರಿಯ ನ್ಯೂಕ್ಲಿಯಿಕ್ ಆಮ್ಲಗಳ ಉತ್ಪನ್ನ ಅಗತ್ಯ. ಈ ಕಿಣ್ವಗಳ ಸಂಶ್ಲೇಷಣೆಯಿಂದ ನಂಜಿನ ಡಿಎನ್‍ಎ ತಯಾರಿಕೆ ಅನುಕೂಲವಾಗುತ್ತದೆ. ಅನಂತರ ಕಿಣ್ವಗಳ ಸಂಶ್ಲೇಷಣೆ ನಿಂತುಹೋಗಿ ನಂಜಿನ ರಚನಕಾಲ ಪ್ರೋಟೀನುಗಳ ಸಂಶ್ಲೇಷಣೆ ಪ್ರಾರಂಭವಾಗುತ್ತದೆ. ಈ ಮಾದರಿ (ಮಾಡೆಲ್) ಬಹುಶಃ ಎಲ್ಲ ನಂಜುಗಳಿಗೂ ಅನ್ವಯಿಸುತ್ತದೆ. ಕೊಹೆನ್ ನಂಜಿನ ಕ್ಷೇತ್ರದಲ್ಲಿ ಮಾಡಿದ ಮಾರ್ಗದರ್ಶನದಿಂದ ಈ ಕ್ಷೇತ್ರದಲ್ಲಿ ನಡೆದಿರುವ ಆಧುನಿಕ ಸಂಶೋಧನೆಗಳಿಗೆ ಬಹುಮಟ್ಟಿಗೆ ಅನುಕೂಲವಾಯಿತು.

	ಕೊಹೆನ್ ನಂಜಿನ ಕ್ಷೇತ್ರಕ್ಕೆ ಸಂಬಂಧಪಟ್ಟ ಇತರ ಕ್ಷೇತ್ರಗಳಲ್ಲೂ ದುಡಿದಿದ್ದಾನೆ. ಸ್ಟ್ರೆಪ್ಟೋಮೈಸಿನ್ ಎಂಬ ಜೀವವಿರೋಧಿ (ಆಂಟಿಬಯಾಟಿಕ್) ಬ್ಯಾಕ್ಟೀರಿಯಗಳ ನ್ಯೂಕ್ಲಿಯಿಕ್ ಆಮ್ಲಗಳ ಚಯಾಪಚಯ ಮತ್ತು ರಚನೆಗಳಲ್ಲಿ ಗಾಢವಾದ ಮಾರ್ಪಾಡುಗಳನ್ನು ಮಾಡುತ್ತವೆ ಎಂದು ತೋರಿಸಿದ್ದಾನೆ.

	ಕೊಹೆನ್ 1963ರಲ್ಲಿ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಕನಾಗಿಯೂ ಥೆರಾಪ್ಯೂಟಿಕ್ ರೀಸರ್ಚ್ ಭಾಗದ ಮುಖ್ಯಸ್ಥನಾಗಿಯೂ ನೇಮಕಗೊಂಡ. ಕೊಹೆನ್ ನಡೆಸಿರುವ ಸಂಶೋಧನೆಗಳ ಮಹತ್ತ್ವವನ್ನು ಅರಿತು ಅಮೆರಿಕನ್ ಅಸೋಸಿಯೇಷನ್ ಫಾರ್ ಅಡ್ವಾನ್ಸ್‍ಮೆಂಟ್ ಆಫ್ ಸೈನ್ಸ್ ಸಂಸ್ಥೆ ತನ್ನ ಮೆಡಲನ್ನು ಇತ್ತು ಗೌರವಿಸಿತು. ಕೊಹೆನ್ 1967ರಲ್ಲಿ ನ್ಯಾಷನಲ್ ಅಕಾಡಮಿ ಆಫ್ ಸೈನ್ಸಸ್ ಸಂಸ್ಥೆಯ ಸದಸ್ಯನಾಗಿ ಚುನಾಯಿತನಾದ.
(ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ